Breaking News

ಮಂಗಳೂರು: ಬಾಲಕಿಯ ಅತ್ಯಾಚಾರ ಪ್ರಕರಣ – ಇಬ್ಬರು ಆರೋಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ, ದಂಡ

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್ ಟಿಎಸ್ ಸಿ-2 ನ್ಯಾಯಾಲಯವು 20 ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಕಾವಳಗದ್ದೆಯ ಸಚಿನ್‌ ಸಂತೋಷ್ ನಾಯ್ಕ, (22) ಮತ್ತು ಹಟ್ಟಿಕೆರೆಯ ಪ್ರವೀಣ್ ಜಯಪಾಲ್ ನಾಯ್ಕ (33) ಶಿಕ್ಷೆಗೊಳಗಾದ ಆರೋಪಿಗಳು. ಸಂತ್ರಸ್ತ ಬಾಲಕಿ 2022ರ ಎ.12ರಂದು ಮಧ್ಯಾಹ್ನ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹರ್ಯಾಣಕ್ಕೆ ಹೋಗುವ ಟಿಕೆಟ್ ಪಡೆಯಲೆಂದು ನಿಂತಿದ್ದರೆನ್ನಲಾಗಿದೆ. ಈ ವೇಳೆ ಅಲ್ಲಿಗೆ ಬಂದ ಆರೋಪಿಗಳು ಆಕೆಯ ಬಳಿ ತೆರಳಿ ಟಿಕೆಟ್ ಮಾಡಿಸಿಕೊಡುವುದಾಗಿ ಹೇಳಿದ್ದರು. ಬಳಿಕ ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಪಡೆಯುವಂತೆ ನಟಿಸಿ ‘ಇಲ್ಲಿ ಟಿಕೆಟ್ ಸಿಗುವುದಿಲ್ಲ, ಕಾರವಾರದಲ್ಲಿ ಟಿಕೆಟ್ ತೆಗೆಸಿಕೊಡುತ್ತೇವೆ. ಅಲ್ಲಿಗೆ ಹೋಗೋಣ’ ಎಂದು ನಂಬಿಸಿ ಆಕೆಯನ್ನು ರೈಲಿನಲ್ಲಿ ಕಾರವಾರಕ್ಕೆ ಕರೆದೊಯ್ದಿದ್ದರು ಎಂದು ಆರೋಪಿಸಲಾಗಿತ್ತು. ಬಳಿಕ ಬಾಲಕಿಯನ್ನು ಅಂಕೋಲಾದಲ್ಲಿ ಪ್ರವೀಣ್ ಜಯಪಾಲ್ ನಾಯ್ಕನ ಮನೆಗೆ ಮತ್ತು ಲಾಡ್ಜ್‌ ಗೆ ಕರೆದೊಯ್ದು ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರೆನ್ನಲಾಗಿದೆ. ಎ.14ರಂದು ಮಂಗಳೂರು ರೈಲು ನಿಲ್ದಾಣಕ್ಕೆ ಕರೆತಂದು ಬಿಟ್ಟಿದ್ದರು. ಬಾಲಕಿಯನ್ನು ಗಮನಿಸಿದ ರೈಲ್ವೆ ಪೊಲೀಸರಿಗೆ ಸಂಶಯ ಬಂದು ವಿಚಾರಿಸಿದಾಗ ಆಕೆ ನಡೆದ ಘಟನೆಯನ್ನು ವಿವರಿಸಿದ್ದರು. ಪ್ರಕರಣ ದಾಖಲಿಸಿಕೊಂಡ ರೈಲ್ವೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ರೈಲ್ವೇ ಪೊಲೀಸ್‌ ಇನ್‌ಸ್ಪೆಕ್ಟರ್ ಮೋಹನ್‌ ಕೊಟ್ಟಾರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್‌ಟಿಎಸ್‌ಸಿ-2 ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಜೂ.12ರಂದು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಫೋಕ್ಸೋ ಕಾಯ್ದೆ ಕಲಂ 6ರಂತೆ ಇಬ್ಬರಿಗೂ ತಲಾ 20 ವರ್ಷ ಕಠಿಣ ಸಜೆ, 50,000 ರೂ, ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ1 ವರ್ಷ ಕಠಿಣ ಸಜೆ, ಭಾರತೀಯ ದಂಡ ಸಂಹಿತೆ ಕಲಂ 366ರಡಿ ತಲಾ 10 ವರ್ಷ ಕಠಿಣ ಸಜೆ, 30,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 6 ತಿಂಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಆ ಹಣದಲ್ಲಿ 1 ಲಕ್ಷ ರೂ. ನ್ನು ತಕ್ಷಣ ಆಕೆಯ ವಿದ್ಯಾಭ್ಯಾಸಕ್ಕೆ ಒದಗಿಸಬೇಕು. ಉಳಿದ ಮೊತ್ತವನ್ನು ಠೇವಣಿಯಾಗಿಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ ವಾದಿಸಿದ್ದರು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...