Breaking News

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಉಡುಪಿ ಜಿಲ್ಲಾ ಸಮಾನ ಮಾನಸ್ಕರ ಬೃಹತ್ ಪ್ರತಿಭಟನೆ

ಉಡುಪಿ: ಕೈಯಲ್ಲಿ ಶಸ್ತ್ರಾಸ್ತ್ರ, ಒಳಗಡೆ ದ್ವೇಷ ಹಾಗೂ ಸರಕಾರ ಬೆಂಬಲ ಇದ್ದರೆ ಏನೆಲ್ಲ ಆಗುತ್ತದೆಯೋ ಅದೆಲ್ಲವೂ ಮಣಿಪುರದಲ್ಲಿ ಇಂದು ನಡೆಯುತ್ತಿದೆ. ಅಲ್ಲಿನ ಜನರು ಒಟ್ಟುಗೂಡಿ ಬದುಕಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮಣಿಪುರದಲ್ಲಿ ನಡೆದಿರುವುದು ಧ್ವೇಷದ ಅತ್ಯಾಚಾರವೇ ಹೊರತು ಕಾಮದ ಅತ್ಯಾಚಾರ ಅಲ್ಲ. ಈ ಧ್ವೇಷ ಇದೀಗ ದೇಶಾದ್ಯಂತ ಹಬ್ಬುತ್ತಿದೆ  ಎಂದು ಹಿರಿಯ ಚಿಂತಕ ಶಿವಸುಂದರ್ ಆರೋಪಿಸಿದ್ದಾರೆ.

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಉಡುಪಿ ಜಿಲ್ಲಾ ಸಮಾನ ಮಾನಸ್ಕರ ವೇದಿಕೆಯ ನೇತೃತ್ವದಲ್ಲಿ ಬುಧವಾರ ಉಡುಪಿ ಮಿಷನ್ ಕಂಪೌಂಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಪ್ರತಿಭಟನಾ ಸಭೆಯನ್ನು ದ್ದೇಶಿಸಿ ಅವರು ಮಾತನಾಡುತಿದ್ದರು.

ಈ ಧ್ವೇಷದ ರಾಜಕಾರಣ ನಿಲ್ಲಬೇಕಾದರೆ ಮನುಷ್ಯತ್ವವನ್ನು ಮರುಸ್ಥಾಪಿಸಲು ಇಂತಹ ಶಕ್ತಿಯನ್ನು ಒಗ್ಗಟ್ಟು, ಮಾತು ಹಾಗೂ ಹೋರಾಟದಿಂದ ಸೋಲಿಸ ಬೇಕು. ಇದು ಮಾತ್ರ ಈ ದೇಶವನ್ನು ಉಳಿಸಲು ಇರುವ ಏಕೈಕ ದಾರಿಯಾಗಿದೆ. ಮಣಿಪುರ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ಕೊಡಬೇಕು. ಕೂಕಿಗಳಿಗೆ ವಿಶ್ವಾಸ ಬರುವವರೆಗೆ ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಬೇಕು. ನಿರಂತರ ದೌರ್ಜನ್ಯ ಎಸಗುತ್ತಿರುವ ಶಸ್ತ್ರಾಸ್ತ್ರ ಪಡೆಯ ಅಧಿಕಾರ ಕಿತ್ತುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಕಳೆದ 90 ದಿನಗಳಿಂದ ಮಣಿಪುರದಲ್ಲಿ ನಿರಂತರವಾಗಿ ನಡೆಯುತ್ತಿರುವ ಏಕ ಮುಖಿ ಅತ್ಯಾಚಾರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವೌನವಾಗಿರುವುದು ಕೇವಲ ಅಕಸ್ಮಿಕವಲ್ಲ. ನೇರವಾಗಿ ಭಾಗಿಯಾಗಿದ್ದಾರೆ. ಅದು ದುರುದ್ದೇಶದಿಂದ ಕೂಡಿದ ವೌನವಾಗಿದೆ. ಪ್ರಧಾನಿ ವೌನದ ಹಿಂದೆ ಸರಕಾರ ನೇರ ಹಸ್ತಕ್ಷೇಪ ಇದೆ. ಪ್ರಧಾನಿ ವೌನವನ್ನು ಆಯುಧವನ್ನಾಗಿ ಮಾಡಿದಾಗ ಜನ ಮಾತು, ಪ್ರತಿಭಟನೆಯನ್ನು ಆಯುಧವನ್ನಾಗಿಸಬೇಕಾಗಿದೆ ಎಂದರು.

ಮಣಿಪುರದಲ್ಲಿ ಕೂಕಿಗಳ ಬಗ್ಗೆ ಧ್ವೇಷವನ್ನು ಬಹಳ ವ್ಯವಸ್ಥಿತವಾಗಿ ಹುಟ್ಟು ಹಾಕಿ, ಗುಜರಾತ್ ಮಾದರಿಯಲ್ಲಿಯೇ ಹಿಂಸಾಚಾರ ನಡೆಸುತ್ತಿದ್ದಾರೆ. ಇದು ಕೇವಲ ಮಣಿಪುರದ ಘಟನೆ ಅಥವಾ ಕ್ರಿಶ್ಚಿಯನ್ನರ ಮೇಲೆ ಆಗುತ್ತಿರುವ ಹಿಂಸೆ ಅಲ್ಲ. ಇದನ್ನು ನೆಪವಾಗಿ ಇಟ್ಟುಕೊಂಡು ಇಡೀ ಈಶಾನ್ಯ ಭಾರತದಲ್ಲಿ ಹಿಂದುತ್ವ ಭಾರತದ ಪರಿಕಲ್ಪನೆಯ ಭಾಗವಾಗಿ ಹಿಂಸೆ ನಡೆಸಲಾಗುತ್ತಿದೆ ಎಂದು ಅವರು ದೂರಿದರು.

 

ಮಹಿಳಾ ಹೋರಾಟಗಾರ್ತಿ ಜಾನೆಟ್ ಬರ್ಬೋಜಾ ಮಾತನಾಡಿದರು. ಹಿರಿಯ ಚಿಂತಕ ಪ್ರೊ.ಫಣಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಸಂಸ ಅಂಬೇಡ್ಕರ್‌ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಉಡುಪಿ ಬಿಷಪ್ ಅತೀ ವಂ.ಜೆರಾಲ್ಡ್ ಐಸಾಕ್, ಕೆಥೋಲಿಕ್ ಸಭಾ ನಿಯೋಜಿತ ಅಧ್ಯಕ್ಷ ರೆನಾಲ್ಡ್ ಡಿ.ಅಲ್ಮೇಡಾ, ಇಫ್ಕಾ ಜಿಲ್ಲಾ ಗೌರವಾಧ್ಯಕ್ಷ ಲೂವಿಸ್ ಲೋಬೊ, ಸಮಾನ ಮಾನಸ್ಕರ ವೇದಿಕೆಯ ಸಂಚಾಲಕ ಪ್ರಶಾಂತ್ ಜತ್ತನ್ನ ಮೊದಲಾದವರು ಉಪಸ್ಥಿತರಿದ್ದರು. ಫಾ.ಡೆನ್ನೀಸ್ ಡೇಸಾ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಸಲ್ಲಿಸಲಾಯಿತು. ಇದಕ್ಕೂ ಮುನ್ನಾ ಉಡುಪಿ ಶೋಕಾ ಮಾತ ಇಗರ್ಜಿಯಿಂದ ಹೊರಟ ಕಾಲ್ನಡಿಗೆ ಜಾಥವು ಉಡುಪಿ ಸರ್ವಿಸ್ ಬಸ್ ನಿಲ್ದಾಣ, ಕೆ.ಎಂ.ಮಾರ್ಗ, ಕೋರ್ಟ್ ರಸ್ತೆ ಮಾರ್ಗವಾಗಿ ಮಿಷನ್ ಕಂಪೌಂಡ್‌ಗೆ ಆಗಮಿಸಿತು. ಜಾಥದಲ್ಲಿ ಸಹಸ್ರಾರು ಸಂಖ್ಯೆಯ ಜನ ಪಾಲ್ಗೊಂಡಿದ್ದರು. ಮಣಿಪುರ ಹಿಂಸಾಚಾರ ಖಂಡಿಸುವ ನಿಟ್ಟಿನಲ್ಲಿ ಬಹುತೇಕ ಪ್ರತಿಭಟನಕಾರರು ಕಪ್ಪುಬಟ್ಟೆ ಹಾಗೂ ಪಟ್ಟಿಯನ್ನು ಧರಿಸಿದ್ದರು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...